ದಂತಿದುರ್ಗ -
ಕರ್ನಾಟಕದ ರಾಷ್ಟ್ರಕೂಟ ರಾಜವಂಶದ ಸ್ಥಾಪಕ. ಎರಡನೆಯ ಇಂದ್ರನ ಮಗ. ಈತ ಮೊದಲ ಬಾದಾಮಿ ಚಾಳುಕ್ಯರ ಸಾಮಂತನಾಗಿ ಏಲಾಪುರ (ಈಗಿನ ಎಲ್ಲೋರ) ಪ್ರಾಂತ್ಯದಲ್ಲಿ ಆಳುತ್ತಿದ್ದಂತೆ ತಿಳಿದುಬರುತ್ತದೆ. ಅನಂತರ ಇವನು ಸ್ವತಂತ್ರನಾದ. ಇವನ ಪ್ರಾಬಲ್ಯದ ಕಾಲ ಸು. 735-756. ದಂತಿದುರ್ಗನ ಕಾಲದಲ್ಲಿದ್ದ ರಾಜಕೀಯ ಪರಿಸ್ಥಿತಿ ಅವನ ಪ್ರಾಬಲ್ಯಕ್ಕೆ ಅನುಕೂಲವಾಗಿತ್ತು. 2ನೆಯ ವಿಕ್ರಮಾದಿತ್ಯ ಆಗ ಚಾಳುಕ್ಯ ದೊರೆಯಾಗಿದ್ದ. ಅವನು ಪಲ್ಲವರನ್ನು ಎದುರಿಸಿ ಯುದ್ಧ ಮಾಡಬೇಕಾಗಿತ್ತು. ಉತ್ತರದಲ್ಲಿ ಅರಬರು ವಲಭಿಯ ಮೈತ್ರಕರನ್ನೂ ಗುರ್ಜರ - ಪ್ರತೀಹಾರರನ್ನೂ ಸೋಲಿಸಿ ದಕ್ಷಿಣದತ್ತ ನುಗ್ಗಲು ಹವಣಿಸುತ್ತಿದ್ದರು. ಗುಜರಾತಿನಲ್ಲಿ ಚಾಳುಕ್ಯರ ರಾಜ್ಯಪಾಲನಾಗಿದ್ದ ಅವನಿಜನಾಶ್ರಯ ಪುಲಕೇಶೀ ಅವರನ್ನು ತಡೆದು ನಿಲ್ಲಿಸಲು ಯತ್ನಿಸುತ್ತಿದ್ದ. ಈ ಸಮಯದಲ್ಲಿ ದಂತಿದುರ್ಗ ಪ್ರಬಲನಾದ. 742ರ ವೇಳೆಗೆ ಅವನು ಸ್ವತಂತ್ರನಾಗಿದ್ದನೆಂಬುದು ಅವನ ಎಲ್ಲೋರ ಶಾಸನದಿಂದ ತಿಳಿದುಬರುತ್ತದೆ. 754ರ ಶಾಸನವೊಂದರಲ್ಲಿ ತನ್ನನು ಮಹಾರಾಜಾಧಿರಾಜ ಎಂದು ಕರೆದುಕೊಂಡಿದ್ದಾನೆ. 

ಇವನು ಕಾಂಚಿ, ಕಳಿಂಗ, ಕೋಸಲ, ಶ್ರೀಶೈಲ, ಮಾಳವ ಮತ್ತು ಲಾಟ ರಾಜ್ಯಗಳನ್ನು ಜಯಿಸಿದನೆಂದು ಹೇಳಲಾಗಿದೆ. ಇವೆಲ್ಲವನ್ನೂ ಗೆದ್ದನೆಂಬುದಕ್ಕೆ ಖಚಿತ ಆಧಾರಗಳಿಲ್ಲ. ಇವನು ಚಾಳುಕ್ಯರ ಸಾಮಂತನಾಗಿದ್ದಾಗ ತನ್ನ ಅಧಿಪತಿಯೊಂದಿಗೆ ಕಾಂಚಿಯ ಮೇಲೆ ದಂಡೆತ್ತಿಹೋಗಿದ್ದನೆಂದೂ ಪಲ್ಲವರ ಮೇಲೆ ನಡೆದ ಯುದ್ಧದಲ್ಲಿ ಭಾಗವಹಿಸಿದನೆಂದೂ ಅರಬರ ಆಕ್ರಮಣವನ್ನು ಹಿಮ್ಮೆಟ್ಟಿಸುವುದರಲ್ಲಿ ಅವನಿಜನಾಶ್ರಯ ಪುಲಕೇಶಿಗೆ ನೆರವು ನೀಡಿದನೆಂದೂ ಹೇಳಲಾಗಿದೆ. ಗುರ್ಜರರನ್ನೂ ಮಾಳವರನ್ನೂ ಇವನು ಗೆದ್ದು ಹಿರಣ್ಯಗರ್ಭ ಯಾಗ ಮಾಡಿದನೆಂಬುದೂ ಒಂದು ಹೇಳಿಕೆ. ಅಂತೂ ಚಾಳುಕ್ಯ 2ನೆಯ ವಿಕ್ರಮಾದಿತ್ಯನ ಕಾಲದಲ್ಲೇ ಬಲಿಷ್ಠನಾಗಿ ಉತ್ತರ ಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು 2ನೆಯ ಕೀರ್ತಿವರ್ಮನ ಆಳ್ವಿಕೆಯ ಕಾಲದಲ್ಲಿ ಕ್ರಮಕ್ರಮವಾಗಿ ವಿಸ್ತರಿಸತೊಡಗಿದನೆನ್ನಬಹುದು. 2ನೆಯ ಕೀರ್ತಿವರ್ಮನಿಂದ ಈತನನ್ನು ಅಡಗಿಸಲಾಗಲಿಲ್ಲವೆಂಬುದು ಸ್ಪಷ್ಟ. ಕೀರ್ತಿವರ್ಮನೇ ಇವನಿಂದ ಪರಾಜಯ ಹೊಂದಿರಬೇಕು. ಇಮ್ಮಡಿ ಕೀರ್ತಿವರ್ಮ 757ರ ವರೆಗೆ ಆಳುತ್ತಿದ್ದನೆಂದು ತಿಳಿದುಬರುವುದರಿಂದ ಚಾಳುಕ್ಯ ರಾಜ್ಯದ ಒಂದು ಭಾಗ ಅವನ ಕೈಯಲ್ಲೇ ಇತ್ತೆಂದು ಹೇಳಬಹುದು.

ದಂತಿದುರ್ಗ ಸು. 756ರಲ್ಲಿ ತೀರಿಕೊಂಡ. ಅನಂತರ ಪಟ್ಟಕ್ಕೆ ಬಂದ 1ನೆಯ ಕೃಷ್ಣ 2ನೆಯ ಕೀರ್ತಿವರ್ಮನನ್ನು ಸಂಪೂರ್ಣವಾಗಿ ಸೋಲಿಸಿದ.							
	(ಎನ್.ಎಲ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ